ಅಗೇಥಾನ್

 (ಕ್ರಿ.ಪೂ. ಸುಮಾರು 448-400) ಪ್ರಾಚೀನ ಗ್ರೀಕ್ ರುದ್ರನಾಟಕವನ್ನು ಮಹೋನ್ನತಿಗೆ ಏರಿಸಿ, ಅತ್ಯುತ್ತಮ ಮಟ್ಟದಲ್ಲಿರಿಸಿ ಕಾಪಾಡಿದ ಈಸ್ಕಿಲಸ್, ಸಫೊಕ್ಲೀಸ್ ಮತ್ತು ಯುರಿಪಿಡೀಸ್‍ರ ಅನಂತರ ಅದರ ಖ್ಯಾತಿಯನ್ನು ಉಳಿಸುವುದಕ್ಕೆ ಶ್ರಮಪಟ್ಟವರಲ್ಲಿ ಬಹು ಮುಖ್ಯಸ್ಥ. ಅವನು ಯುರಿಪಿಡೀಸನ ಸ್ನೇಹಿತನೂ ಸಾಕ್ರಟೀಸನ ಶಿಷ್ಯನೂ ಆಗಿದ್ದ. ಅವನ ಜೀವನದ ವಿಚಾರ ತಿಳಿದಿಲ್ಲ. ಒಂದೆರಡು ದಂತಕಥೆಗಳು ಪ್ರಚುರವಾಗಿವೆ. ಅವನ ರೂಪಕಗಳನ್ನೂ ರೂಪಕರಚನಾ ಪದ್ಧತಿಯನ್ನೂ ಕುರಿತು ಇತರ ಲೇಖಕರು ಹೇಳಿರುವ ವಾಕ್ಯಗಳು ಹಲಕೆಲವು ಇವೆ.

 ರುದ್ರನಾಟಕಗಳ ವಾರ್ಷಿಕಸ್ಪರ್ಧೆಯಲ್ಲಿ ಅಗೇಥಾನ್‍ಗೆ ಮೊಟ್ಟ ಮೊದಲು ಪ್ರಥಮ ಬಹುಮಾನ ದೊರೆತದ್ದು ಕ್ರಿ.ಪೂ.416ರಲ್ಲಿ. ಅವನಿಗೆ ಆಗ ಮೂವತ್ತು ವರ್ಷ. ಬಯಲು ನಾಟಕಶಾಲೆಯಲ್ಲಿ ಕಿಕ್ಕಿರಿದು ತುಂಬಿದ್ದ ಸಾಮಾಜಿಕರ ನಡುವೆ ತೀರ್ಪುಗಾರರು ಅವನಿಗೆ ಲಾರೆಲ್ ಕಿರೀಟವನ್ನಿಟ್ಟು ಗೌರವಿಸಿದರಂತೆ. ವಿಜಯೋತ್ಸವಕ್ಕೋಸ್ಕರ ತನ್ನ ಬಿಡಾರದಲ್ಲಿ ಇಷ್ಟಮಿತ್ರರಿಗೆ ಏರ್ಪಡಿಸಿದ ಔತಣ ಕೂಟದಲ್ಲಿ ಅನ್ಯಾದೃಶ ಸಂವಾದ ಒಂದು ಜರುಗಿತು. ಪ್ರಮುಖ ಅತಿಥಿಗಳು ತಮ್ಮ ತಮ್ಮಲ್ಲೇ ಆದ ಒಪ್ಪಂದದಂತೆ ಪ್ರೇಮದ ಮೇಲೆ ಒಬ್ಬೊಬ್ಬರಾಗಿ ಭಾಷಣ ಮಾಡಿದರು. ಅದರಲ್ಲಿ ಭಾಗವಹಿಸಿದ್ದ ಅರಿಸ್ಟಾಡೀಮಸ್ ಎಷ್ಟೋ ದಶಕಗಳ ತರುವಾಯ ಅಲ್ಲಿ ನಡೆದ ವಿದ್ಯಮಾನವನ್ನೆಲ್ಲ ತನಗೆ ವರ್ಣಿಸಿ ಹೇಳಿದನೆಂದು ಪ್ಲೇಟೊ ತನ್ನ ಸಿಂಪೋಸಿಯಂ ಎಂಬ ಮಹಾಪ್ರಬಂಧದಲ್ಲಿ ಬರೆದಿದ್ದಾನೆ. ಕ್ರಿ.ಪೂ.416ರ ಅನಂತರ ಹಲವು ಸಂವತ್ಸರ ಕಾಲ ಅಗೇಥಾನ್ ಯಶಸ್ವಿಯಾಗಿದ್ದ. ಸಫೊಕ್ಲೀಸ್, ಯುರಿಪಿಡೀಸ್ ಮಾತ್ರ ಅವನಿಗಿಂತ ಮೇಲೆಂಬುದು ನಿಶ್ಚಿತವಾಗಿತ್ತು. ಹಾಗಿದ್ದರೂ ಏತಕ್ಕೊ ಕ್ರಿ.ಪೂ. 406ರಲ್ಲಿ ಅಥೆನ್ಸನ್ನು ಬಿಟ್ಟು ರಾಜ ಅರ್ಕಿಲಉಸ್ ಆಳುತ್ತಿದ್ದ ಮ್ಯಾಸಿಡೋನಿಯಕ್ಕೆ ಅಗೇಥಾನ್ ಹೊರಟುಹೋದ. ಪ್ರಾಯಶಃ ಅರ್ಕಿಲಉಸನಿಗಿದ್ದ ಗ್ರೀಕ್ ಸಂಸ್ಕøತಿಯ ಮೇಲಣ ವ್ಯಾಮೋಹ ಕಾರಣವಾಗಿರಬೇಕು. ಇಂಥ ಗ್ರೀಕ್ ಕವಿಗಳ ಪ್ರವಾಸಕ್ಕೆ, ಅಥವಾ ಅರಿಸ್ಟೋಫೆನಿಸ್‍ನಿಂದ ತನಗಾದ ಅಪಹಾಸ್ಯವನ್ನು ಸಹಿಸಲಾರದೇ ಅಗೇಥಾನ್ ಅಥೆನ್ಸ್‍ನ್ನು ತ್ಯಜಿಸಿರಬೇಕು. ಅಗೇಥನನ ಆಕೃತಿ ತೋರ್ಕೆಗಳು ಹೆಂಗಸಿನ ತರದವು ಎಂದೂ ಅವನು ರಚಿಸುತ್ತಿದ್ದ ಭಾವಗೀತೆಗಳ ಧಾಟಿ ಇರುವೆ ಸಾಲಿನ ಕಾಲ್ನಡಿಗೆಯಂತೆ ಎಂದೂ ಅರಿಸ್ಟೋಫೆನಿಸನ ವಿಡಂಬನ, ಅಲ್ಲಲ್ಲಿ ಕೇಳಿಬರುವ ಒಂದು ದಂತಕಥೆ ದಿಟವಾದರೆ, ಅಗೇಥಾನ್ ಸ್ತ್ರೀಪಾತ್ರದ ಭಾಷಣವನ್ನು ಬರೆಯುವಾಗ ಸ್ತ್ರೀಯರಿಗೆ ಸಹಜವಾದ ಬಟ್ಟೆಬರೆಯನ್ನು ಹಾಕಿಕೊಳ್ಳುತ್ತಿದ್ದ; ಹಾಗೆ ಮಾಡದಿದ್ದರೆ ಅವನ ಲೇಖನಿ ಓಡುತ್ತಿರಲಿಲ್ಲ! 

 ಅಗೇಥಾನನ ಕೃತಿಗಳ ಚೂರು ಪಾರು ಮಾತ್ರ ಉಳಿದುಬಂದಿವೆ. ವಿಶೇಷ ಪ್ರಸಿದ್ಧಿಯನ್ನು ಪಡೆದಿದ್ದ ಅವನ ಆಸ್ತಿಯಸ್ ರುದ್ರನಾಟಕ ಕೂಡ ಅನುಪಲಬ್ಧ. ತನ್ನತನದ ಒತ್ತಡವೂ ಆತುರವೂ ಅವನ ಮೇಲೆ ಬಹಳವಾಗಿತ್ತು. ನಾಟಕಕ್ಕೆ ಬೇಕಾದ ಕಥಾಸಾಮಗ್ರಿಯನ್ನು ಪೂರ್ವಿಕರಂತೆ ಪುರಾಣ ಕಥಾವಳಿಯಿಂದ ಆರಿಸಿಕೊಳ್ಳದೆ ಅವನು ತನ್ನ ವಿವೇಚನಾಶಕ್ತಿಗೆ ಕೆಲಸ ಕೊಟ್ಟು ವಿನೂತನವಾಗಿ ಕಲ್ಪಿಸಿಕೊಳ್ಳುತ್ತಿದ್ದ. ನಾಟ್ಯಮೇಳದ ಸಂಗೀತವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆಯನ್ನು ತಂದ. ಕಥಾವಸ್ತುವಿಗೂ ಮೇಳದ ಗೀತೆಗಳಿಗೂ ಇದ್ದ ಸಂಬಂಧವನ್ನು ಕಡಿದುಹಾಕಿ, ಮೇಳಗೀತೆಗಳು ಕೇವಲ ವಿಷ್ಕಂಭಕಗಳಾಗಿ ಬೇರ್ಪಡುವಂತೆ ನಿಯಂತ್ರಿಸಿದ. ಅಂಥ ಹೊಸ ಪ್ರಯೋಗಗಳ ಪ್ರಭಾವವೂ ಪರಿಣಾಮವೂ ಏನೆಂಬುದನ್ನು ಅರಿತುಕೊಳ್ಳುವುದಕ್ಕೆ ಮೊದಲೇ ಅವನು ಮ್ಯಾಸಿಡೋನಿಯಕ್ಕೆ ತೆರಳಿದ್ದ. ಅಗೇಥಾನ್ ಗತಿಸಿದ ಅನಂತರ ಗ್ರೀಕ್ ರುದ್ರನಾಟಕ ಬೇಗ ಇಳಿಮುಖವಾಯಿತು.   

(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ